ಶ್ರೀಕಂಠಶಾಸ್ತ್ರೀ, ಎಸ್
	1904-74. ಸುಪ್ರಸಿದ್ಧ ಇತಿಹಾಸ ವಿದ್ವಾಂಸರು.  1904 ನವೆಂಬರ್ 5 ರಂದು ಸೊಂಡೆಕೊಪ್ಪದಲ್ಲಿ ಜನಸಿದರು. ತಂದೆ ರಾಮಸ್ವಾಮಿ ಶಾಸ್ತ್ರಿಗಳು ಸರ್ಕಾರಿ ನೌಕರರಾಗಿದ್ದರಿಂದ ಇವರ ಶಿಕ್ಷಣ ಬೇರೆ ಬೇರೆ ಸ್ಥಳಗಳಲ್ಲಿ ನಡೆಯಿತು.  ನಂಜನಗೂಡು, ಚಿಕ್ಕಬಳ್ಳಾ ಪುರ ಮತ್ತು ಕೋಲಾರ ಗಳಲ್ಲಿ ಆರಂಭದ ವ್ಯಾಸಂಗ ವನ್ನು ಮುಗಿಸಿದ ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರೌಢ ವ್ಯಾಸಂಗವನ್ನು ನಡೆಸಿ, ಎಂ.ಎ. ಪದವಿ ಪಡೆದರು. ಆ ಕಾಲೇಜಿನಲ್ಲಿ ಪ್ರಾಧ್ಯಾಪಕ ರಾಗಿದ್ದ ಎನ್.ಎಸ್. ಸುಬ್ಬ ರಾವ್, ಬಿ.ಎಂ. ಶ್ರೀಕಂಠಯ್ಯ, ಎಂ.ಎಚ್. ಕೃಷ್ಣ, ಎ.ಆರ್. ಕೃಷ್ಣಶಾಸ್ತ್ರಿಗಳಂಥ ಮೇಧಾವಿಗಳ ಮಾರ್ಗದರ್ಶನದಲ್ಲಿ ತಮ್ಮ ಬದುಕು ಬರೆಹಗಳನ್ನು ಕುದುರಿಸಿಕೊಂಡರು.  ಮಹಾರಾಜ ಕಾಲೇಜಿನ ಇತಿಹಾಸ ವಿಭಾಗದಲ್ಲಿ ಟ್ಯೂಟರ್ ಎಂದು (1930) ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಶ್ರೀಕಂಠಶಾಸ್ತ್ರಿಗಳು ಮುಂದೆ ಅಧ್ಯಾಪಕರಾಗಿ (1935), ಪ್ರಾಧ್ಯಾಪಕರಾಗಿ (1954), ಇಲಾಖೆಯ ಮುಖ್ಯಸ್ಥರಾಗಿ ಕೆಲಸ ಮಾಡಿ ನಿವೃತ್ತರಾದರು. ತಮ್ಮ ಜೀವನದ ಕೊನೆಯವರೆಗೂ ಸಂಶೋಧನೆ ಮತ್ತು ಬರೆವಣಿಗೆಯಲ್ಲಿ ತೊಡಗಿದ್ದರು. ಇವರು ಬೆಂಗಳೂರಿನಲ್ಲಿ 1974 ಮೇ 7ರಂದು ನಿಧನರಾದರು. 

	ಸಂಸ್ಕøತ, ಕನ್ನಡ, ತಮಿಳು, ತೆಲುಗು, ಪಾಲಿ, ಅರ್ಧಮಾಗಧಿ ಮುಂತಾದ ಭಾರತೀಯ ಭಾಷೆಗಳಲ್ಲದೆ ಚೀನಿ, ಜಪಾನ್, ಜರ್ಮನ್, ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳಲ್ಲೂ ಪರಿಶ್ರಮವನ್ನು ಸಂಪಾದಿಸಿ ಕೊಂಡಿದ್ದ ಶ್ರೀಕಂಠಶಾಸ್ತ್ರಿಗಳು ಭಾರತೀಯ ಇತಿಹಾಸ, ಸಂಸ್ಕøತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ 400ಕ್ಕೂ ಮಿಕ್ಕ ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ; ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿದೆಸೆ ಯಲ್ಲಿಯೇ ತಮ್ಮ ಬರೆವಣಿಗೆಯನ್ನು ಆರಂಭಿಸಿದ (1924) ಇವರು ಬರೆದ ಸಂಶೋಧನ ಲೇಖನವೊಂದು ಲಂಡನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಮಹಾರಾಜ ಕಾಲೇಜಿನ ಹಿಸ್ಟರಿ ಅಸೋಸಿಯೇಷನ್‍ನ ಆಶ್ರಯದಲ್ಲಿ ಶಿವಗಂಗೆಯ ಇತಿಹಾಸವನ್ನು ಕುರಿತು ಇವರು ಮಂಡಿಸಿದ ಸಂಶೋಧನ ಪ್ರಬಂಧ ಬಹುಜನರ ಗಮನ ಸೆಳೆಯಿತು. ಅನಂತರ ಇವರು ಬರೆದ ಗ್ರೀಕ್ ದಾಖಲೆಗಳಲ್ಲಿವೆಯೆನ್ನಲಾದ ಕನ್ನಡ ಮಾತುಗಳ ಸಂಭಾವ್ಯತೆ, ಬಸವಣ್ಣನವರ ಕಾಲ ಹಾಗೂ ಅವರು ಮಾಡಿದರೆಂದು ಪ್ರತೀತಿಯಿರುವ ಪವಾಡಗಳ ಸತ್ಯಾಂಶ, ರಾಮಾನುಜರು ಎಲ್ಲೆಡೆ ಸಂಚರಿಸಿ ಬಿಟ್ಟಿದೇವ ಮತ್ತಿತರ ರಾಜರ ಮತಪರಿವರ್ತನೆ ಮಾಡಿದರೆಂಬ ವಾದದ ಸಂಭವನೀಯತೆ, ಚಾವುಂಡರಾಯನು ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದ ಕರ್ತೃವೆಂಬ ವಾದಕ್ಕೆ ಕೆಲವು ಬಾಧಕ ಅಂಶಗಳು, ಗಂಗವಂಶದ ರಾಜರ ವಂಶಾವಳಿ ಹಾಗೂ ಸಾಧನೆ, ಪ್ರಾಗ್ಭಾರತೀಯ ಸಂಸ್ಕøತಿ, ಹರಪ್ಪ, ಮೊಹೆಂಜೊದಾರೊ ನಾಗರಿಕತೆ ಸಿಂಧೂಲಿಪಿಯ ರೂಪರೇಷೆ-ಈ ಮುಂತಾದ ಪ್ರಬಂಧಗಳು ಆಯಾ ವಿಷಯಗಳಲ್ಲಿ ಮೌಲಿಕ ಸಂಶೋಧನೆ ಗಳೆನಿಸಿವೆ.  	 ಭಾರತೀಯ ಸಂಸ್ಕøತಿ (1954), ರೋಮನ್ ಚಕ್ರಾಧಿಪತ್ಯದ ಚರಿತ್ರೆ (1949), ಪ್ರಪಂಚ ಚರಿತ್ರೆಯ ರೂಪರೇಷೆಗಳು (1957), ಪುರಾತತ್ತ್ವ ಶೋಧನೆ (1960), ಹೊಯ್ಸಳ ವಾಸ್ತುಶಿಲ್ಪ (1965)-ಇವು ಇವರು ಕನ್ನಡದಲ್ಲಿ ಬರೆದಿರುವ ಗಣ್ಯ ಗ್ರಂಥಗಳು. ಅರ್ಲಿ ಗಂಗಾಸ್ ಆಫ್ ತಲಕಾಡ್ (1952), ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ (1940) ಈ ಮುಂತಾದ ಇವರ ಪ್ರೌಢ ಗ್ರಂಥಗಳು ಇಂಗ್ಲಿಷಿನಲ್ಲಿ ಪ್ರಕಟವಾಗಿವೆ.

	ಇವರಿಗೆ ಅನೇಕ ಗೌರವ ಪ್ರಶಸ್ತಿಗಳು ದೊರಕಿವೆ. ಮೈಸೂರಿನಲ್ಲಿ 1935ರಲ್ಲಿ ನಡೆದ ಪ್ರಾಚ್ಯ ಸಮ್ಮೇಳನದಲ್ಲಿ ಶಂಕರಭಗವತ್ಪಾದರ ಕಾಲನಿ ರ್ಣಯದ ಬಗ್ಗೆ ಪ್ರಬಂಧ ಮಂಡಿಸಿದರು. ಬಳ್ಳಾರಿಯಲ್ಲಿ 1958ರಲ್ಲಿ ನಡೆದ ನಲವತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕಲಾಗೋಷ್ಠಿಗೆ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ 1970ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಮೈಸೂರಿನಲ್ಲಿ ಇವರಿಗೆ ಶ್ರೀಕಂಠಿಕಾ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು (1973).

	ಇವರು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದ 112 ಸಂಶೋಧನ ಲೇಖನ ಗಳನ್ನು ಸಂಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಶೋಧನಾ ಲೇಖನಗಳು (1975) ಎಂಬ ಸಂಪುಟವನ್ನು ಪ್ರಕಟಿಸಿದೆ.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
									
(ಎಸ್.ಆರ್.ಆರ್.ಎ.)